ಕರ್ನಾಟಕ ಜನಪದ ನೃತ್ಯ : ಹಾಡು, ಕಥೆಗಳಂತೆ ನೃತ್ಯವೂ ಜಾನಪದ ಸಂಪತ್ತಿನ ಒಂದು ಮುಖ್ಯ ಅಂಗ. ಕರ್ನಾಟಕದ ವಿವಿಧ ಭಾಗಗಳಲ್ಲಿ ಅನೇಕ ರೀತಿಯ ನೃತ್ಯವಿಧಾನಗಳು ಬಳಕೆಯಲ್ಲಿವೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕೊಡಗು, ದಕ್ಷಿಣ ಕನ್ನಡ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ- ಈ ಪ್ರದೇಶಗಳಲ್ಲಿ ವೈಶಿಷ್ಟ್ಯ ಪಡೆದಿರುವ ನೃತ್ಯಗಳಲ್ಲಿ ಮುಖ್ಯವಾದವನ್ನು ಮಾತ್ರ ಇಲ್ಲಿ ಪರಿಗಣಿಸಲಾಗಿದೆ. == ಪ್ರಮುಖ ಜನಪದ ನೃತ್ಯಗಳು == === ಲಂಬಾಣಿಯರ ಜನಪದ ನೃತ್ಯಗಳು === ಗುಡ್ಡಬೆಟ್ಟಗಳಲ್ಲಿ ವಾಸಿಸುವ ಲಂಬಾಣಿಯರ ಜನಪದ ನೃತ್ಯಗಳು ರಮಣೀಯವಾಗಿವೆ. ಕಸೂತಿ, ಮಣಿ, ಕನ್ನಡಿಗಳಿಂದ ಹೊಲೆದಿರುವ ಬಣ್ಣದ ಲಂಗ, ಕುಪ್ಪಸಗಳನ್ನು ತೊಟ್ಟುಕೊಂಡು, ಕಾಲುಬೆರಳುಗಳಿಂದ ತಲೆಯ ಕೂದಲಿನವರೆಗೂ ಆಭರಣಗಳನ್ನು ಧರಿಸಿ, ಕೈಗಳನ್ನು ಜೋತುಹಾಕಿ ಸಾಮೂಹಿಕವಾಗಿ ಕುಣಿಯುವಾಗ ಈ ನೃತ್ಯದ ಚಲನೆಗಳ ಲಾಲಿತ್ಯ ಎದ್ದುಕಾಣುತ್ತದೆ. === ಕೋಲಾಟ === ಕರ್ನಾಟಕದ ಎಲ್ಲ ಕಡೆಗಳಲ್ಲೂ ಕೋಲಾಟಗಳು ಆಕರ್ಷಣೀಯವಾಗಿರುತ್ತವೆ. ಅವುಗಳಲ್ಲಿ ವೀರರಸ ಹೆಚ್ಚು. ಸೊಗಸಾದ ಗೀತೆಗಳನ್ನು ಹಾಡುತ್ತ ನರ್ತಕರು ಕೋಲು ಹಿಡಿದು ಚಕ್ರಾಕಾರವಾಗಿ ನಿಂತು ಹಾಡಿಗೆ ಸರಿಯಾಗಿ ಗೆಜ್ಜೆಕಾಲಿನ ಹೆಜ್ಜೆಗಳನ್ನು ಹಾಕುತ್ತ, ಕೋಲು ಹೊಯ್ಯುತ್ತ ಕುಣಿಯುತ್ತಾರೆ. ನೃತ್ಯ ಸಾಗಿದಂತೆ ಪದ್ಮ, ಚಕ್ರ, ಕೋಟೆ, ಜಡೆ ಮುಂತಾದ ಆಕೃತಿಗಳಲ್ಲಿ ನರ್ತಿಸುತ್ತಾರೆ. ಪದವನ್ನು ಚೆನ್ನಾಗಿ ಹಾಡುವವನೇ ಮುಖಂಡ. ದಿನವೆಲ್ಲ ದುಡಿದುಸೋತ ರೈತರು ಸುಗ್ಗಿಯ ದಿನಗಳ ರಾತ್ರಿ ಬೆಳದಿಂಗಳಲ್ಲಿ ಕೋಲುಗಳನ್ನು ಕುಟ್ಟುತ್ತ ಪದವನ್ನು ಹಾಡುತ್ತ ಗುಂಪುಗುಂಪಾಗಿ ಕೋಲಾಟವಾಡುತ್ತಾರೆ. ಈ ಕೋಲು ಪದ್ಯಗಳ ಸಾಹಿತ್ಯ ಬಹಳ ಸೊಗಸು. ಈ ಪದಗಳಲ್ಲಿ ಉತ್ಸಾಹ ಆನಂದ ರಸಗಳೇ ಪ್ರಧಾನ. ಗಂಡಸರೇ ಹೆಚ್ಚಾಗಿ ನಡೆಸುವ ಈ ಕೋಲಾಟಗಳನ್ನು ಕೆಲವೆಡೆ ಹೆಂಗಸರೂ ಆಡುತ್ತಾರೆ. ಕೋಲಾಟಗಳಲ್ಲಿ- ಒಂಟಿಕೋಲು, ಜೋಡಿಕೋಲು, ತೊಟ್ಟಿಲುಕೋಲು, ಸುತ್ತುಕೋಲು ಇತ್ಯಾದಿ ವಿಧಗಳಿವೆ. ಕೋಲಾಟವಾದ ಮೇಲೆ ಕೋಲುಗಳನ್ನು ಭೂಮಿತಾಯಿಗೆ ಒಪ್ಪಿಸುವುದರಲ್ಲೂ ಒಂದು ರೀತಿ ಇದೆ. === ಸುಗ್ಗಿಯ ಕುಣಿತ === ಸುಗ್ಗಿಯ ಕುಣಿತ ಅನೇಕ ಕಡೆಗಳಲ್ಲಿ ಪ್ರಚಾರದಲ್ಲಿದೆ. ಅದರಲ್ಲಿ ರಂಗದ ಕುಣಿತ, ಮಾರಿ ಕುಣಿತ ಎಂಬ ವಿಧಾನಗಳಿವೆ. ಸುಗ್ಗಿಯ ಸಂತೋಷ ದುಡಿದ ರೈತನಿಗಲ್ಲದೆ ಇನ್ನಾರಿಗೆ ತಿಳಿದೀತು ? ಅವನ ಕಷ್ಟ, ಶ್ರಮ, ಜಾಗರಣೆ, ಮಳೆಯ ಹಂಬಲ, ಇವೆಲ್ಲ ಕಾಳಿನ ರಾಶಿಯನ್ನು ನೋಡುವಾಗ ಮಾಯವಾಗುತ್ತವೆ. ಹಾಡು, ಕುಣಿತಗಳಲ್ಲಿ ಅವನ ಸಂತೋಷ ಹೊರಹೊಮ್ಮುತ್ತದೆ. ಒಂದು ತಮಟೆಯ ತಾಳಕ್ಕೆ ನಾಲ್ಕಾರು ಜನ ಸಾಲಾಗಿ ನಿಂತು ಹೆಜ್ಜೆಹಾಕಲು ಆರಂಭಿಸುತ್ತಾರೆ. ಒಂದು ಕೈಯಲ್ಲಿ ಬಣ್ಣದ ಚೌಕ ಹಿಡಿದು ಇನ್ನೊಂದು ಕೈಯನ್ನು ಸೊಂಟದ ಮೇಲಿಟ್ಟು ಬಳುಕುತ್ತ, ಕುಪ್ಪಳಿಸುತ್ತ ಕುಣಿಯುತ್ತಾರೆ. ಹಳ್ಳಿಯ ಗುಡಿಯ ಹೊರಾಂಗಣದಲ್ಲಿ ಉರಿಹಾಕಿ ತಮಟೆ ಬಾರಿಸಿ ಕೇಕೆ ಹಾಕುತ್ತಿರುವಾಗ ಹಳ್ಳಿಯ ಜನರೆಲ್ಲ ಸೇರಿ ಇದರಲ್ಲಿ ಭಾಗವಹಿಸುತ್ತಾರೆ. ಹೀಗೆಯೇ ಅನೇಕ ಬಗೆಯ ನೃತ್ಯಗಳು ಕರ್ನಾಟಕದಲ್ಲಿ ಲಭ್ಯವಾಗುತ್ತವೆ. === ವೀರಭದ್ರ ಕುಣಿತ === ವೀರಭದ್ರ ಕುಣಿತ, ವೀರಮಕ್ಕಳ ಕುಣಿತಗಳು ಮೈಸೂರಿನಲ್ಲಿವೆ. ವೀರಕುಣಿತ ವೀರರಿಗೆ ಸಾಧ್ಯ. ಕಾಳಗಕ್ಕೆ ಮುಂಚೆಯೋ ಬೇಟೆಯ ಕೊನೆಯಲ್ಲೋ ಹುಮ್ಮಸ್ಸು ಹುರುಪುಗಳನ್ನು ಹೊರ ಸೂಸುವ ಈ ವೀರಕುಣಿತ ಆವೇಶಭರಿತವಾದುದು. ಕುಣಿವಾಗಿನ ಈ ವೀರರ ಕೇಕೆ ಹಲವಾರು ಮೈಲಿಗಳವರೆಗೆ ಕೇಳುತ್ತಿರುತ್ತದೆ. === ಕಂಸಾಳೆ === ಹಳೆಯ ಮೈಸೂರಿನ ಬೀಸುಕಂಸಾಳೆ ನೃತ್ಯಗಳಲ್ಲಿ ಕಂಸಾಳೆಯ ಗತ್ತಿಗನುಸಾರವಾಗಿರುವ ಹಿನ್ನಲೆ ಸಂಗೀತಕ್ಕೆ ಹೊಂದುವಂತೆ ನೃತ್ಯಗಾರರು ಆಕರ್ಷಣೀಯವಾಗಿ ಕುಣಿಯುತ್ತಾರೆ. ಕಂಸಾಳೆ ಕುಣಿತದಲ್ಲಿ ಒಂದು ಕಂಚಿನ ಬಟ್ಟಲು ಮತ್ತು ತಾಳಗಳನ್ನು ಉಪಯೋಗಿಸುತ್ತಾರೆ. ಕಂಸಾಳೆ ಪದ ಲಾವಣಿ ರೂಪದ ಹಾಡು. ನೃತ್ಯಗಾರರ ಜೊತೆಗೆ ಇಬ್ಬರು ಕಂಸಾಳೆ ಬಾರಿಸುತ್ತ ಪಲ್ಲವಿ ಹಾಡುತ್ತಾರೆ. ಒಬ್ಬ ಕಂಸಾಳೆಯನ್ನು ಬಡಿಯುತ್ತ ಬಾಗಿ ಬಳುಕಿ ಕುಣಿಯುತ್ತಾನೆ. === ನಂದಿಕಂಬದ ಕುಣಿತ === ನಂದಿಕಂಬದ ಕುಣಿತವನ್ನು (ನಂದಿಕೋಲು) ಸಾಮಾನ್ಯವಾಗಿ ಮೆರವಣಿಗೆಗಳಲ್ಲಿ ಕಾಣಬಹುದು. ಯಾವುದಾದರೂ ವಿಜೃಂಭಣೆಯ ಮೆರವಣಿಗೆ ಹೊರಟಾಗ ಅಲಂಕೃತವಾದ 30-40 ಅಡಿ ಎತ್ತರದ ಕಂಬವನ್ನು ನೃತ್ಯಕಾರರು ಹೊಟ್ಟೆಗೆ ಜೋತುಹಾಕಿಕೊಂಡು ತಮ್ಮಟೆಯ ತಾಳಕ್ಕೆ ಸರಿಯಾಗಿ ಕುಣಿಯುತ್ತ ಕೋಲನ್ನು ನೆಟ್ಟಗೆ ನಿಲ್ಲಿಸುವುದು ಆಶ್ಚರ್ಯಕರ. === ಕರಗದ ಕುಣಿತ === ಕರಗದ ಕುಣಿತ ಮೈಸೂರಿನ ವಿಶೇಷ ಜನಪದ ನೃತ್ಯ. ಅಲಂಕೃತ ಕರಗವನ್ನು ತಲೆಯ ಮೇಲೆ ಧರಿಸಿ, ಭಕ್ತಿಪರವಶನಾದ ಒಬ್ಬ ನೃತ್ಯಗಾರ ವಿವಿಧ ರೀತಿಯ ಕೈಚಲನೆ, ಕಾಲುಚಲನೆಗಳಿಂದ ನರ್ತಿಸುತ್ತಾನೆ. ವಾದ್ಯಗೋಷ್ಠಿಯ ನಾದಕ್ಕೆ ಸ್ಫೂರ್ತಿಗೊಂಡು ದಿಗ್ಭ್ರಾಂತನಂತೆ ಕುಣಿದರೂ ಆತನ ತಲೆಯ ಮೇಲಿನ ಕರಗ ಒಂದಿಷ್ಟೂ ಅಲುಗಾಡುವುದಿಲ್ಲ, ತುಳುಕುವುದಿಲ್ಲ. ಜೊತೆಗೆ ಖಡ್ಗ ಹಿಡಿದು ಅವನನ್ನು ಹಿಂಬಾಲಿಸುವ ಪಂಗಡ ಆ ದೃಶ್ಯಕ್ಕೆ ಕಳೆ ಕೊಡುತ್ತದೆ. ಜಡೆ ಮತ್ತು ಚಿತ್ರಗೋಪುರ ಎಂಬವು ಕರಗದ ಇತರ ವಿಧಗಳು. ಇವುಗಳಲ್ಲದೆ ಡೊಳ್ಳುಕುಣಿತ, ಬಣಜದ ತಾಂಡ ಕುಣಿತ, ಕುದುರೆ ಕುಣಿತ, ಪುಜಾ ಕುಣಿತ, ವೀರಗಾಸೆ ಕುಣಿತ, ಪಟ್ಟಾ ಕುಣಿತ, ಮುಂತಾದ ಹಲವಾರು ಕುಣಿತಗಳಿವೆ. == ಕೊಡಗಿನ ಜನಪದ ನೃತ್ಯಗಳು == ಕೊಡಗಿನ ಹುತ್ತರಿ ನೃತ್ಯ ಮತ್ತು ಬೊಳ್ಕಾಟ ನೃತ್ಯಗಳು ಜನಪ್ರಿಯವಾದುವು. ದೇವರ ಪುಜಾವಿಧಾನವಾದ ಈ ನೃತ್ಯವನ್ನು ಧಾರ್ಮಿಕ ಸಂದರ್ಭಗಳಲ್ಲಿ ಗಂಡಸರು ಮಾಡುತ್ತಾರೆ. ಸುಗ್ಗಿಯ ಕಾಲದಲ್ಲಿ, ಉತ್ಸವ, ಮದುವೆ ಸಮಾರಂಭಗಳಲ್ಲಿ ಕೊಡವರು ಕಪ್ಪು ಬಣ್ಣದ ಉದ್ದ ನಿಲುವಂಗಿ, ಧೋತಿ ಧರಿಸಿ, ತಲೆಗೆ ರುಮಾಲು ಸುತ್ತಿ, ಪೀಚ ಕತ್ತಿಯನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು ಆನಂದದಿಂದ ನರ್ತಿಸುತ್ತಾರೆ. ಹಾಡುಗಾರಿಕೆಯ ಜೊತೆಗೆ ಚರ್ಮವಾದ್ಯ ಬಾರಿಸುವವರು ಮಧ್ಯದಲ್ಲಿ ನಿಂತು ತಾಳವನ್ನು ಕೊಡುತ್ತಿರಲು ಸುತ್ತಲೂ ನೃತ್ಯಗಾರರು ಡಮರು ನಾದಕ್ಕೆ ಚಾಮರಗಳನ್ನು ಬೀಸಿ ನರ್ತಿಸುವ ದೃಶ್ಯ ಮೋಹಕವಾದುದು. == ತುಳುನಾಡಿನ ಜನಪದ ನೃತ್ಯಗಳು == ತುಳುನಾಡಿನಲ್ಲಿ ಅನೇಕ ವಿಧದ ಜನಪದ ನೃತ್ಯಗಳು ರೂಢಿಯಲ್ಲಿವೆ. ಅಲ್ಲಿನ ಹರಿಜನರು ಲೇ ಲೇ ಲೇ ಲೋ ಎಂಬ ಪಲ್ಲವಿ ಹಾಡುತ್ತ ದುಡಿಯ ತಾಳಕ್ಕೆ ಕುಣಿಯುತ್ತಾರೆ. ಒಬ್ಬಾತ ದುಡಿಯನ್ನು ಬಾರಿಸುತ್ತಾನೆ. ಹೆಂಗಸರು ಬಳುಕಿ, ಬಾಗಿ, ಕೈ ಅಲುಗಿಸಿ ಹಿಂದೆ ಮುಂದೆ ಸರಿದು ಕೂಟ ನೃತ್ಯದಲ್ಲಿ ಭಾಗವಹಿಸುತ್ತಾರೆ. ಕುಂದಾಪುರ, ಉಡುಪಿಯ ಹರಿಜನರಲ್ಲಿ 5-6 ಯುವಕರು ಚಿಕ್ಕ ಕೋಲುಗಳನ್ನು ಹಿಡಿದು ಸರಳವಾಗಿ ಹೆಜ್ಜೆ ಹಾಕಿ ಕುಣಿಯುತ್ತಾರೆ. ಹಿನ್ನೆಲೆ ಸಂಗೀತಕ್ಕೆ ಇಬ್ಬರು ಚರ್ಮವಾದ್ಯದವರು, ಒಬ್ಬ ಕೊಳಲು ಬಾರಿಸುವವನು ಇರುತ್ತಾರೆ. ಹೆಂಗಸೊಬ್ಬಳು ದೊಡ್ಡ ತಾಳಗಳನ್ನು ಬಾರಿಸುತ್ತಾಳೆ. ಸಂಗೀತದ ಲಯ ಹೆಚ್ಚಾದಂತೆ ನೃತ್ಯಗಾರರ ಆವೇಶ ಹೆಚ್ಚಾಗುತ್ತದೆ. ಪುತ್ತೂರು ತಾಲ್ಲೂಕಿನ ಮೇರಾ ಜನರಲ್ಲಿ ಹೆಂಗಸರು ಮಾಡುವ ಕೂಟನೃತ್ಯಗಳಿವೆ. ಇಬ್ಬರು ಗಂಡಸರು ದುಡಿಬಡಿದಂತೆ ಬಿಳಿ ಸೀರೆ ಉಟ್ಟ ಹೆಂಗಸರು ಕೈಚಪ್ಪಾಳೆಗಳಿಂದ ಹಿಂದೆಮುಂದೆ ಬಳುಕಿ ಬಾಗಿ ವಾದ್ಯಗಾರರ ಸುತ್ತಲೂ ಕುಣಿಯುತ್ತಾರೆ. ಅವರ ಸರಳ ಲಲಿತ ಚಲನೆಗಳಲ್ಲಿ ಸ್ನೇಹಪರವಶತೆಯ ಆನಂದ ಉಕ್ಕಿ ಹರಿಯುತ್ತದೆ. ರಾಣಿಯಾರ್ ಪಂಗಡದವರು ಭಕ್ತಿ ಶಕ್ತಿಗಳಿಂದ ಕೋಲಾಟ ಮಾಡುವಾಗ ಅವರ ಕೋಲುಗಳೂ ಕಾಲುಗೆಜ್ಜೆಗಳೂ ಮಾತನಾಡುವಂತೆ ಭಾಸವಾಗುತ್ತದೆ. ಕಾರ್ಕಳ ತಾಲ್ಲೂಕಿನ ಕುಡುಬಿಯರಲ್ಲಿ ಸುಂದರ ಕೂಟ ನೃತ್ಯವಿದೆ. ಗಂಡಸರು ಬಿಳಿ ಬಟ್ಟೆಯುಟ್ಟು ಕೆಂಪು ರುಮಾಲು ಸುತ್ತಿ, ಕೈಯಲ್ಲಿ ಮಣ್ಣಿನ ವಾದ್ಯ ಹಿಡಿದು ಎರಡು ಸಾಲಾಗಿ ನಿಂತು ಹಾಡುತ್ತ ಸಂಭಾಷಣೆ ನಡೆಸುತ್ತಾರೆ. === ದೈವರಾಧನೆ === ಪಶ್ಚಿಮ ಘಟ್ಟದ ಮಲೆಕುಡಿಯರ ಪಂಗಡಗಳಲ್ಲಿ ವಿಶೇಷ ತರಹದ ಒಂದು ಭೂತನೃತ್ಯವಿದೆ. ಮೂವರು ಯುವಕರು ಖಡ್ಗಾಯುಧರಾಗಿ ಕಹಳೆ-ಕೊಂಬು ವಾದ್ಯಕ್ಕೆ ಹೊಂದಿದಂತೆ ಮೈಮರೆತು ಕುಣಿಯುತ್ತಾರೆ. ಈ ನೃತ್ಯ ಅನಾಗರಿಕರ ಯುದ್ಧನೃತ್ಯವನ್ನು ಹೋಲುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂತಗಳ ಕುಣಿತ ಹೆಸರಾದುದು. ಬೇರೆ ಬೇರೆ ಜನರು ಬೇರೆ ಬೇರೆ ಭೂತಗಳನ್ನು ನಂಬಿ ಪುಜಿಸುತ್ತಾರೆ. ವರ್ಷದ ನಾನಾಕಾಲಗಳಲ್ಲಿ ಈ ದೆವ್ವಗಳಿಗೆ ಜಾತ್ರೆ ನಡೆಯುತ್ತದೆ. ದೆವ್ವದ ಆವೇಶ ಪಡೆಯುವವರ ಜಾತಿಯೇ ಬೇರೊಂದಿದೆ. ಈ ನೃತ್ಯಗಳೆಲ್ಲ ಭಕ್ತಿಪ್ರಧಾನವಾದುವು. *ಭಕ್ತರು ತಾವು ನಂಬುವ ಭೂತಗಳ ತೃಪ್ತಿಗಾಗಿ ಅವನ್ನು ಆಹ್ವಾನಿಸಿ, ಉಣಿಸುವರು. ಭೂತದ ಆವೇಶ ಪಡೆಯುವ ಪುಜಾರಿ ವಿಶಿಷ್ಟ ವೇಷಭೂಷಣಗಳನ್ನು ಧರಿಸಿ ಬಣ್ಣ ಲೇಪಿಸಿಕೊಂಡು ವೀರಾವೇಶದಿಂದ ಕುಣಿದು ತನ್ನನ್ನೇ ಮರೆಯುತ್ತಾನೆ. ಆತನ ಬಾಯಿಂದ ಬರುವ ಮಾತುಗಳು ಭೂತದ ಮಾತುಗಳೆಂಬ ಭ್ರಾಂತಿ ಜನರಲ್ಲಿ ಮೂಡುತ್ತದೆ. ಬೇರೆ ಬೇರೆ ಭೂತಗಳಿಗೆ ತಕ್ಕ ನಡೆ, ನೃತ್ಯ, ವೇಷ, ಕಿರೀಟ, ಭೂಷಣಗಳಿರುತ್ತವೆ. ಸಾಮಾನ್ಯವಾಗಿ ಭೂತಗಳ ಉಗ್ರಸ್ವರೂಪ ಆಯಾ ವೇಷದಲ್ಲಿ ವ್ಯಕ್ತವಾಗುತ್ತದೆ. ಇಂಥ ನೃತ್ಯ ಸಂಪ್ರದಾಯದಲ್ಲಿ ನಾಗನೃತ್ಯ ವಿಚಿತ್ರವಾದುದು. ವೈದ್ಯರೆಂಬ ಪುಜಾರಿಗಳ ಈ ನೃತ್ಯಕ್ಕೆ ನಾಗಮಂಡಲವೆನ್ನುತ್ತಾರೆ. ರಂಗಮಂಟಪದಲ್ಲಿ ಮಹಾಶೇಷನ ರಂಗೋಲಿಯನ್ನು ಹಾಕಿಸುತ್ತಾರೆ. ಪುಜಾರಿ ಕೆಂಪು ರೇಷ್ಮೆಯನ್ನುಟ್ಟು ಚದುರಿದ ಕೂದಲನ್ನು ಬಿಟ್ಟು ಸುಬ್ಬರಾಯನಾಗಿ ಬಂದು ನಿಲ್ಲುತ್ತಾನೆ. ಅವನ ಮುಂದೆ ಪ್ರಕೃತಿ ಪುರುಷ ಸೂಚಕವಾಗಿ ಅರ್ಧ ಗಂಡಸಿನ ಅರ್ಧ ಹೆಂಗಸಿನ ಉಡುಪನ್ನು ಧರಿಸಿದ ನೃತ್ಯಗಾರ ನಿಂತಿರುತ್ತಾನೆ. ಹಿಮ್ಮೇಳದ ಗಾಯಕರು ದೇವರ ಲೀಲೆಗಳನ್ನು ಹಾಡುತ್ತಾರೆ. ಒಂದು ಡಮರು, ಒಂದು ಜೊತೆ ತಾಳಕ್ಕೆ ಅನುಗುಣವಾಗಿ ನಾಗದ ಆವೇಶ ತಂದುಕೊಂಡು ದೇಹಕ್ಕೆ ಮೂಳೆಗಳೇ ಇಲ್ಲವೆಂಬಂತೆ ನಾಗನರ್ತನ ನರ್ತಿಸುವಾಗ ಅದು ಪ್ರೇಕ್ಷಕರಿಗೆ ರೋಮಾಂಚನಕಾರಿಯಾಗಿ ಪರಿಣಮಿಸುತ್ತದೆ. ನಾಗಬ್ರಹ್ಮನೇ ಪ್ರತ್ಯಕ್ಷವಾಗಿ ಎದುರಿಗೆ ಬಂದಂತೆ ಭಾಸವಾಗುತ್ತದೆ. == ಯಕ್ಷಗಾನ ಬಯಲಾಟ == ಕನ್ನಡ ನಾಡಿನ ಯಕ್ಷಗಾನ ಬಯಲಾಟದ ಪರಂಪರೆ ಆ ಸಂಸ್ಕೃತಿಯ ಅತ್ಯಂತ ಸುಂದರವಾದ ಅಂಗವಾಗಿದೆ. ಯಕ್ಷಗಾನ ಬಯಲಾಟ ಪ್ರೇಕ್ಷಣೀಯ ನೃತ್ಯ ಸಂಪ್ರದಾಯ. ಮಹಾಭಾರತ ರಾಮಾಯಣಾದಿ ಕಥಾನಕಗಳಲ್ಲಿ ಬರುವ ಪಾತ್ರಗಳು ಅತಿಮಾನುಷ ವೇಷಭೂಷಣ, ಕಿರೀಟ, ಬಣ್ಣಲೇಪನಗಳಿಂದ ಕೂಡಿದ್ದು ಪ್ರೇಕ್ಷಕರನ್ನು ಮೈಮರೆಸುತ್ತಾರೆ. ತಾಳ ನೃತ್ಯಕ್ಕೂ ಸಂಗೀತಕ್ಕೂ ಹೊಂದಿಕೊಂಡು ಭಾವಾವೇಶವನ್ನೂ ಸ್ಫೂರ್ತಿಯನ್ನೂ ಒದಗಿಸುತ್ತದೆ. ಸಾಹಿತ್ಯ ಪಂಡಿತ ಪಾಮರರನ್ನು ರಂಜಿಸುವಂತಿರುತ್ತದೆ. ಭಾಗವತರು ಚಂಡೆ, ಮದ್ದಳೆ, ಶ್ರುತಿ, ತಾಳಗಳೊಡನೆ ಕಥೆಯನ್ನು ಆರಂಭಿಸುತ್ತಾರೆ. ಇಬ್ಬರು ಎತ್ತಿಹಿಡಿದ ಪರದೆಯ ಹಿಂದಿನಿಂದ ಅದ್ಭುತವೇಷಧಾರಿಗಳು ನೃತ್ಯಕ್ಕೆ ಸಿದ್ಧರಾಗುತ್ತಾರೆ. ಪಾತ್ರಧಾರಿಗಳು ನರ್ತಿಸುತ್ತಿರಲು ಭಾಗವತರು ಜಾಗಟೆ ಕೋಲುಗಳಿಂದ ತಾಳ ಸೂಚಿಸುತ್ತ ಪ್ರಸಂಗದ ಸಾಹಿತ್ಯವನ್ನು ಹಾಡಿ ಸಭಿಕರಾಗಿ ಹಾಸ್ಯಗಾರರಾಗಿ ಕಥಾಸರಣಿಯನ್ನು ಮುಂದುವರಿಸುತ್ತಾರೆ. ಯಕ್ಷಗಾನ ವೀರರಸ ಪ್ರಧಾನವಾದದ್ದು. ಅಲ್ಲಿನ ವೇಷಗಳ ಅಲಂಕಾರಾದಿಗಳಲ್ಲಿ ಚಿತ್ರಕಲಾಪ್ರೌಢಿಮೆಯಿದೆ; ಧರ್ಮವಿಷಯವನ್ನು ಸರಳ ಮಾತಿನಲ್ಲಿ ಉದಾಹರಣೆ ಸಹಿತ ಕಥಾರೂಪಕವಾಗಿ ಬೋಧಿಸುವ ಮಧುರ ಸಂಭಾಷಣೆಯಿದೆ. ವೇದೋಪನಿಷತ್ತುಗಳ ತತ್ತ್ವಾರ್ಥವನ್ನು ಯಕ್ಷಗಾನ ಸುಲಭವಾಗಿ ತಿಳಿಸುತ್ತದೆ. ದೇದೀಪ್ಯಮಾನರಾದ ಪುರಾಣವ್ಯಕ್ತಿಗಳ ಪಾತ್ರಧಾರಿಗಳು ರಂಗಸ್ಥಳದ ಎತ್ತರವಾದ ಕಾಲು ದೀಪಗಳ, ದೀವಟಿಗೆಗಳ ಬೆಳಕಿನಲ್ಲಿ ಸಂಜೆಯಿಂದ ಮುಂಜಾನೆಯವರೆಗೆ ನರ್ತಿಸುವಾಗ ಪ್ರೇಕ್ಷಕರು ತನ್ಮಯರಾಗುತ್ತಾರೆ. ಯಕ್ಷಗಾನ ಬಯಲಾಟ ಅವರನ್ನು ಮಾಯೆಯ ಸುಂದರ ಕಲಾಜಗತ್ತಿಗೆ ಕೊಂಡೊಯ್ಯುತ್ತದೆ. == ಗೊಂಬೆ ಕುಣಿತಗಳು == === ಗಾರುಡಿ ಗೊಂಬೆ === ಮೆರವಣಿಗೆಯ ಒಂದು ಸಾಲಿನಲ್ಲಿ ಮೊದಲು ಕಾಣುವುದು ದೊಡ್ಡ ಗೊಂಬೆಗಳು- ಒಂದು ಹೆಣ್ಣು, ಒಂದು ಗಂಡು. ಅವುಗಳ ಮೈ ಬಿದಿರ ಬುಟ್ಟಿಗಳದ್ದು. ಮೇಲಿನ ಹೊದಿಕೆ ಹರಕು ಸೀರೆ, ತಲೆಗೆ ಒಂದು ಮಡಕೆ. ರಂಗಕ್ಕೆ ಸಿದ್ಧವಾದ ಮೇಲೆ ಅವಕ್ಕೆ ಗಾರುಡಿಗತನದ ಆವೇಶ ಬರುತ್ತದೆ. ಅವುಗಳ ಜಡ ದೇಹದಲ್ಲಿ ಜೀವ ಸುಳಿದಾಡುತ್ತದೆ. ಅವಕ್ಕೆ ಹೀಗೆ ಜೀವ ಕೊಡುವವ ಅವನ್ನು ಕುಣಿಸುವಾತ; ಬೊಂಬೆಯ ಬಟ್ಟೆಯೊಳಗೆ ಸೇರಿಕೊಂಡು ನರ್ತಿಸುವ ಮನುಷ್ಯ ! === ಸೂತ್ರದ ಗೊಂಬೆ === ಈ ಆಟ ಯಕ್ಷಗಾನದ ಇನ್ನೊಂದು ಪದ್ಧತಿ. ಗೊಂಬೆಗಳನ್ನು ಕುಣಿಸುವ ಆಟಗಾರರು ಪರದೆಯ ಹಿಂದೆ ನಿಂತು, ಅಲಂಕೃತ ಗೊಂಬೆಗಳನ್ನು ಪರದೆಯ ಮುಂದೆ ಬಿಟ್ಟು ಪ್ರೇಕ್ಷಕರಿಗೆ ಕಾಣದಂತೆ ಇದ್ದು ದಾರಗಳಿಂದ ಅವನ್ನು ಆಡಿಸುತ್ತಾರೆ. ಅವು ಕುಣಿದಂತೆ ಹಿಂದೆ ನಿಂತವರು ಹಾಡುತ್ತಾರೆ; ಅವುಗಳ ಅಂಗಾಂಗಗಳ ಚಲನೆಗನುಸಾರವಾಗಿ ಮಾತನಾಡುತ್ತಾರೆ. ಕಥೆ ಸಾಗುತ್ತ ಪ್ರೇಕ್ಷಕರು ಆಟಗಾರನ ಕೈಗೊಂಬೆಗಳಾಗುತ್ತಾರೆ. ಈ ಕೌಶಲ ಅದ್ಭುತವಾದುದು. ಕಥೆಯ ಪಾತ್ರಧಾರಿಗಳಲ್ಲಿ ಹುಟ್ಟುವ ನವರಸಗಳೆಲ್ಲವೂ ಗೊಂಬೆಗಳ ಚಲನೆಗಳ ಮೂಲಕ ಪ್ರೇಕ್ಷಕನಲ್ಲಿ ಉದ್ಭವಿಸಿ ಮಾಯೆಯ ವಾತಾವರಣವನ್ನು ಕಲ್ಪಿಸುತ್ತವೆ. === ತೊಗಲು ಗೊಂಬೆಯಾಟ === ಈ ಗೊಂಬೆಗಳು ಕಾಗದದಂತೆ ತೆಳ್ಳಗಿರುವ ಹದ ಮಾಡಿದ ಚರ್ಮದವು. ಹಿಂದೆ ಪ್ರಕಾಶವಾದ ಬೆಳಕಿಟ್ಟರೆ ಅವು ಪರದೆಯ ಮೇಲೆ ಕಾಣುತ್ತವೆ. ಅವಕ್ಕೆ ಬಣ್ಣ ಹಾಕಿರುತ್ತಾರೆ. ತೆಳ್ಳನೆ ಪರದೆಯ ಹಿಂದೆ ಪ್ರಕಾಶವಾದ ಒಂದು ದೀಪವನ್ನು ಕೊಂಚ ಪಕ್ಕಕ್ಕೆ ನೇತುಹಾಕಿರುತ್ತಾರೆ. ಆಟಗಾರನ ಇಡೀ ಸಂಸಾರವೇ ಈ ಆಟದಲ್ಲಿ ಭಾಗವಹಿಸುತ್ತದೆ. ಒಂದೊಂದಾಗಿ ಗೊಂಬೆಗಳನ್ನು ತೆಗೆದು ಕೊಡುವುದು, ಅವನ್ನು ಕ್ರಮವಾಗಿ ಜೋಡಿಸುವುದು ಮುಂತಾದ ಕೆಲಸವನ್ನು ಹೆಂಡತಿ ಮಕ್ಕಳು ನಿರ್ವಹಿಸುತ್ತಾರೆ. ಗೊಂಬೆಗಳ ಕೈಕಾಲುಗಳಿಗೆ ಕಡ್ಡಿಗಳನ್ನು ಸಿಕ್ಕಿಸಿ, ತನ್ನ ನೆರಳು ಪರದೆಯ ಮೇಲೆ ಬೀಳದಂತೆ ಬೆಳಕಿನ ಹಿಂದೆ ನಿಂತು ಅವನ್ನು ಯಜಮಾನ ಪರದೆಗೆ ಅಂಟಿಸುತ್ತಾನೆ. ಅವುಗಳ ಕೈಕಾಲು ಆಡಿಸಿ ಅದಕ್ಕೆ ಸರಿಯಾಗಿ ಮಾತನಾಡುತ್ತಾನೆ. ಹೆಣ್ಣು ಗೊಂಬೆಗೆ ಹೆಂಡತಿಯ ಸ್ವರ ಸೇರುತ್ತದೆ. ಗೊಂಬೆಗಳು ಕುಣಿಯುವಾಗ ಮಕ್ಕಳ ಹಾಡುಗಳು, ಗೆಜ್ಜೆಶಬ್ದ, ಗಡಸು ಗಂಡಸಿನ ಮಾತುಗಳಿಗೆ ಗಂಡಿನ ಕಂಠ- ಹೀಗೆ ಈ ತೊಗಲು ಗೊಂಬೆಯ ಆಟ ಮೂಕ ಚಲನಚಿತ್ರಕ್ಕೆ ಶಬ್ದ ಜೋಡಿಸಿದಂತಿರುತ್ತದೆ. == ಜನಪದ ನೃತ್ಯ ಗೀತೆಗಳು == ಕರ್ನಾಟಕದಲ್ಲಿ ಸಾವಿರಾರು ಬಗೆಯ ಜನಪದ ಗೀತೆಗಳಿವೆ. ಇವಕ್ಕೆ ಕೆಲವು ಗಾನನೃತ್ಯಗಳೂ ಇವೆ. ಶಿವಶರಣರ ವಚನಗಳು, ಭಾರತ ವಾಚನ, ಹರಿಕಥೆ, ಶಿವಕಥೆ, ಕೀರ್ತನೆ ಇವುಗಳೆಲ್ಲ ಜನತೆಯಲ್ಲಿ ಜ್ಞಾನ ಪ್ರಸಾರಮಾಡಲು ರೂಢಿಯಲ್ಲಿದ್ದ ವಿಧಾನಗಳು. ಇವುಗಳಲ್ಲಿ ಸಂಗೀತ, ಸಾಹಿತ್ಯ, ನಾಟ್ಯ, ಅಭಿನಯ ಇವುಗಳೆಲ್ಲ ಹದವಾಗಿ ಕೂಡಿಕೊಂಡಿದ್ದು ಪಂಡಿತ ಪಾಮರರೆಂಬ ಭೇದಭಾವವಿಲ್ಲದೆ ಎಲ್ಲರಿಗೂ ಮನರಂಜಕವಾಗಿ ವಿಷಯಬೋಧಕವಾಗಿವೆ. ಈಚೆಗೆ ಆಧುನಿಕ ರೀತಿಯ ನಾಟಕ ಚಲನಚಿತ್ರಗಳು ಬಂದು ಹಳೆಯ ಜನಪದ ನೃತ್ಯ ನಾಟಕಾದಿಗಳು ಹಿಂದೆ ಬಿದ್ದಿವೆ. (ಯು.ಎಸ್.ಕೆ.) == ಲಾವಣಿ == ಗರಡಿಯ ಅಂಗಸಾಧನೆಯಲ್ಲಿ ಪರಿಶ್ರಮ ಹೊಂದಿದ ಆಸಾಮಿಗಳು ಗಮ್ಮತ್ತಿನಿಂದ ಲಾವಣಿ ಹಾಡುತ್ತಾರೆ. ಯುದ್ಧ ಬಂದಾಗ ಜನರನ್ನು ಜಾಗೃತಿಗೊಳಿಸಿ, ಹೋರಾಡಲು ಹುರುಪುಗೊಳಿಸುವ ಸಮ್ಮೋಹನಾಸ್ತ್ರವಿದು. ಪಶ್ಚಿಮದ ಜನಪದ ಸಾಹಿತ್ಯದ ಬ್ಯಾಲಡ್ ರಚನೆಗೆ ಇದನ್ನು ಹೋಲಿಸಬಹುದು. ಈಗಲೂ ಧಾರವಾಡ, ಹುಬ್ಬಳ್ಳಿ ಕಡೆ ತಲೆಗೆ ರಂಗಿನ ಮುಂಡಾಸು ಕಟ್ಟಿಕೊಂಡು, ಕಾಲಿಗೆ ಗೆಜ್ಜೆಕಟ್ಟಿಕೊಂಡು, ಕಡ ಹಿಡಿದುಕೊಂಡು ಲಾವಣಿಕಾರನಾದವ ತನ್ನ ಜೊತೆಗೆ ಮತ್ತೊಬ್ಬ ಅದೇ ರೀತಿ ಹಾಡುವವನನ್ನು ನಿಲ್ಲಿಸಿಕೊಂಡು ಬಲುಮೋಜಿನಿಂದ ಹಾಡುವುದುಂಟು. ಈ ಜಾತಿಯಲ್ಲಿ ತುರಾಯಿಲಾವಣಿ ಮತ್ತು ಕಲ್ಗಿಲಾವಣಿ ಎಂಬ ಭೇದವುಂಟು. ತುರಾಯಿಯವ ತಾಳಹಾಕುವ ಕಡಕ್ಕೆ ಹೂವಿನ ಅಲಂಕಾರ ಮಾಡುತ್ತಾನೆ. ಕಲ್ಗಿಯವ ಮಣಿಯನ್ನೋ ನವಿಲುಗರಿಯನ್ನೋ ತೊಡಿಸುತ್ತಾನೆ. ತುರಾಯಿಯವ ಹರಿಭಕ್ತನಾದರೆ ಕಲ್ಗಿಯವ ಶಿವ ಹಾಗೂ ಪರಾಶಕ್ತಿಯ ಭಕ್ತ. ಚೆನ್ನಾಗಿ ಹಾಡಿದಲ್ಲಿ ಲಾವಣಿ ಮಂದಿಯ ಮನಸ್ಸನ್ನು ಹೊಡೆದು ಜಎಬ್ಬಿಸುವುದರಲ್ಲಿ ಸಂದೇಹವಿಲ್ಲ. (ನೋಡಿ-ಕಲ್ಗಿ - ತುರಾಯಿ ) ಪಿರಿಯಾಪಟ್ಟಣದ ಕಾಳಗದ ಲಾವಣಿ ಚಾರಿತ್ರಿಕ ಲಾವಣಿಗೊಂದು ಉತ್ತಮ ನಿದರ್ಶನ. ವೀರರಾಜನಿಗೂ ಮೈಸೂರಿನ ದಳವಾಯಿಗೂ ನಡೆದ ಯುದ್ಧವನ್ನಿದು ವರ್ಣಿಸುತ್ತದೆ. ಲಾವಣಿಗಳಲ್ಲಿ ಪಲ್ಲವಿ, ಚಾಲ್ ಉಡಾನ್, ಚಿಕ್ಕಉಡಾನ್, ಶ್ಲೋಕಗಳು ಅಡಕವಾಗಿರುತ್ತವೆ. ಆದಿ ಝಂಪ, ಚಾಪು ತಾಳಗಳನ್ನು ಸರಾಗವಾಗಿ ಉಪಯೋಗಿಸಲಾಗುತ್ತದೆ. ಜನಸಾಮಾನ್ಯರಲ್ಲಿ ಬಳಕೆಯಾದ ರಾಗಗಳನ್ನೇ ಇಲ್ಲಿ ಕಾಣಬಹುದು. ಉದಾ: ಯಮನ್, ಪೀಲು ಸಿಂಧುಭೈರವಿ, ಶಂಕರಾಭರಣ, ಮಧ್ಯಮಾವತಿ, ಮೋಹನ, ಇತ್ಯಾದಿ. ಹಾಡುವ ಶೈಲಿ ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸವಾಗಬಹುದು. ಶ್ಲೋಕಕ್ಕೆ ತಾಳವಿಲ್ಲ. ಮಿಕ್ಕ ಚಾಲ್ ಉಡಾನ್ಗಳಿಗೆ ತಾಳದ ಗತಿ ಉಂಟು. ಸರ್ಜಪ್ಪನಾಯಕನ ಲಾವಣಿಯೂ ಪ್ರಸಿದ್ಧವಿದೆ. ಐದುನೂರು ಪಾಳೆಯಗಾರರ ಕುರಿತು ಲಾವಣಿಗಳಿವೆ. == ಕೋಲಾಟದ ಪದ == ಕೋಲು ಹಾಕಲು ಕನಿಷ್ಠ ಆರು ಜನ ಬೇಕು. ಹನ್ನೆರಡಿದ್ದರೆ ದೊಡ್ಡ ಗುಂಪು. ಕಾಲಿಗೆ ಗೆಜ್ಜೆಕಟ್ಟಿಕೊಂಡು, ಭಾಗವಹಿಸುವ ಎಲ್ಲ ಮಂದಿ ಬಣ್ಣ ಬಣ್ಣದ ಬಟ್ಟೆ ಧರಿಸಿಕೊಂಡು ಕೋಲಿನ ತಾಳಕ್ಕೆ ಸರಿಯಾಗಿ ಹಾಡುತ್ತ ಕುಣಿಯುತ್ತಾರೆ. ಮೊದಲು ಪ್ರಾರಂಭಕ್ಕೆ, ಮತ್ತೆ ಮುಕ್ತಾಯಕ್ಕೆ ಸರಿಯಾಗಿ ಕಲಿಸಿದವನ ಸಂಕೇತ ಉಂಟು. ಬಗೆಬಗೆಯ ನಡಿಗೆ, ತಿರುಗುವಿಕೆ, ದನಿಯ ಏರು ಇಳಿತ ಮಂದಗತಿ, ತೀವ್ರ ಗತಿಗಳ ವಿನ್ಯಾಸ ಉಂಟು. ಚಿಕ್ಕ ಕೋಲಾಟ, ಜಡೆಕೋಲಾಟಗಳ ಮಾದರಿಗಳು ಬೇರೆ ಬೇರೆ. ಒಬ್ಬ ಸೊಲ್ಲು ಹೇಳಿಕೊಟ್ಟಂತೆ ಮಿಕ್ಕವರು ಹಾಡುವರು. ಸಪ್ತತಾಳಗಳೂ ಜನಪ್ರಿಯವಾದ ನವರಾಗಗಳೂ ಬಳಕೆಯಲ್ಲುಂಟು. ಕೋಲು ರನ್ನದಾ ಕೋಲನ್ನ-ಏಕೋಲು ಕೋಲು ಕೋಲನ್ನ ಅಥವಾ ತಾನು ತಾನಂದನೋ ತಂದನೋ ತಾನಾನು ತಂದನಾನೋ- ಎಂದು ತಾಳದ ಗತಿಗೆ ಹಾಡಿಕೊಳ್ಳುತ್ತಿರುವಂತೆ ಕೋಲಾಟ ಮೊದಲಾಗುತ್ತದೆ. ಉದಾ.-ಮಾತಾಡ್ ಮಾತಾಡ್ ಮಲ್ಲಿಗೆ-ಶಾವಂತಿಗೆ ಇರುವಂತಿಗೆ. ತ್ರಿಪದಿಗಳನ್ನೂ ಕೋಲಿಗೆ ಸರಿಪಡಿಸಿಕೊಳ್ಳುತ್ತಾರೆ. == ಬಂಡಿಯ ಪದ == ಗಾಡಿಯನ್ನು ಹೊಡೆಯುತ್ತ ಎತ್ತಿಗೆ ಕಟ್ಟಿದ ಗೆಜ್ಜೆಗಳ ಹಾಗೂ ಬಂಡಿಯ ಚಕ್ರದ ದನಿಯನ್ನು ಮೀರಿ ಎತ್ತರದ ದನಿಯಲ್ಲಿ ಒಬ್ಬನೇ ‘ಬೇಲೂರ ಹೆಣ್ಣೆ ಬೇಗನೆ ರಾಗಿ ಮಾಡೆ | ಕೂರಿಗೆ ನಿಂತಾವೆ ಹೊಲದಾಗೆ ಎಲೆ ಹೆಣ್ಣೆ ಜಾಣ ನಿಂತವ್ನೆ ಬಿಸುಲಾಗೆ’- ಎಂದು ಹಾಡಿ ಕೇಕೆ ಹಾಕಿದಾಗ ಮುಗಿಲು ಮಾರ್ದನಿಸುವುದು. ಬಂಡಿಪದ ಹಾಡಲು, ಹಾಗೇ ಕಪಿಲೆ ನೀರೆತ್ತುವಾಗ ಹಾಡಲು ಎಂಟು ಎದೆ ಬೇಕಾದೀತು. ಬ್ರಹ್ಮಾಂಡಕ್ಕೆ ದನಿಮುಟ್ಟುವಂತೆ ಹಾಡಿ ಕೇಕೆ ಹಾಕುವುದು ಬಂಡಿ ಪದ ಹಾಡುವವರ ಗತ್ತು. == ಕಿನ್ನರಿ ಪದ == ಕಿನ್ನರಿವಾದ್ಯ ಹಿಡಿದು, ಮಧ್ಯಮ ಶೃತಿಯಲ್ಲಿ ತಂತಿಮೀಟುತ್ತ ದನಿಗೂಡಿಸಿ ಬಹಳ ಇಂಪಾಗಿ ಹಾಡುವ ಪದಗಳಿವು. ಎಂದು ಹಾಡು ಮೊದಲಾಗುತ್ತದೆ. == ಕಂಸಾಳೆ ಪದ == ಕೈಯಲ್ಲಿ ಕಂಚಿನ ಬಟ್ಟಲು; ಅದಕ್ಕೊಂದು ಮುಚ್ಚಳ ಹಿಡಿದುಕೊಂಡು ತಾಳ ಬಾರಿಸಿಕೊಂಡು ಬೆಟ್ಟದ ಮಾದೇಶ್ವರನ ಮೇಲೆ ಪದಗಳನ್ನು ಹೇಳುವವರು ಉದ್ದಕ್ಕೂ ಸಾಹಿತ್ಯ ಜೋಡಿಸಿಕೊಂಡು ಒಂದೇ ರಾಗದಲ್ಲಿ ಹಾಡುತ್ತಾರೆ. ಕನಿಷ್ಠವೆಂದರೆ ಮೇಳದಲ್ಲಿ ಮೂರು ಮಂದಿ ಗಂಡಸರಿರುವರು. ಒಬ್ಬಾತ ತ್ರಿಶೂಲಕ್ಕೆ ಹೂವಿನ ಅಲಂಕಾರ ಮಾಡಿ ಹಿಡಿದುಕೊಂಡಿರುತ್ತಾನೆ ; ಮತ್ತಿಬ್ಬರು ಹಾಡುತ್ತಾರೆ. ಕೊಡಗರ ಬೊಳ್ಕಾಟ: ಕೊಡಗಿನಲ್ಲಿ ಗಂಡಸರು ಮಂಗಲದ ಸಮಯದಲ್ಲಿ ಹಾಗೂ ಹುತ್ತರಿ ಹಬ್ಬದ ಸಮಯದಲ್ಲಿ ಹತ್ತಾರು ಜನ ಸೇರಿಕೊಂಡು ಕುಣಿಯುವರು ; ಕರಿನಿಲುವಂಗಿ, ಜರತಾರಿ ನಡುಕಟ್ಟು, ತಲೆಗೆ ಬಿಳಿಜರತಾರಿ ರುಮಾಲು, ಸೊಂಟದಲ್ಲಿ ಕತ್ತಿ, ಒಂದು ಕೈಯಲ್ಲಿ ಚವರಿ- ಹೀಗೆ ತಮ್ಮ ಪಂಗಡದ ವಿಶೇಷ ಅಲಂಕಾರಗಳಲ್ಲಿರುವ ಅವರನ್ನು ಆಗ ನೋಡಲು ಸೊಗಸೆನಿಸುತ್ತದೆ. ದುಡಿಯ ದನಿಗೆ ಸರಿಯಾಗಿ ವೃತ್ತಾಕಾರದಲ್ಲಿ ನಿಂತು ಹಿಂದಕ್ಕೂ ಮುಂದಕ್ಕೂ ಅಕ್ಕಪಕ್ಕಗಳಿಗೂ ಬಳುಕಾಡುವರು. ಇದೇ ಇವರ ನೃತ್ಯ. ಕೊಡಗಿನ ಭಾಷೆಯ ಬಾಳೋ ಬಾಳೋ ಎಂಬ ಪಾಟು ಹಾಡುವರು. ದೂರಕ್ಕೆ ಆ ದನಿ ದುಂಬಿ ಗುನುಗುಟ್ಟುವಂತೆ, ಪುಂಗಿ ಬಾರಿಸಿದಂತೆ ಕೇಳುವುದು. ಪುನ್ನಾಗವರಾಳಿ, ನಾದನಾಮಕ್ರಿಯ ಮಿಶ್ರವಾಗಿರುವುದಲ್ಲದೆ ತಾಳಗತಿಯಲ್ಲಿ ತಧಿತ್ತಯ್ಯಾ, ತಧಿತ್ತಯ್ಯಾ, ತಧಿತ್ತಯ್ಯಾ ತಧಿತ್ತಾವ ಎಂಬಂತೆ ಹಾಡು ಮುಂದುವರಿಯುವುದು. ಈ ಕುಣಿತ, ಹಾಡುಗಾರಿಕೆ, ದುಡಿಯ ಬಳಕೆ ಗಂಟೆಗಟ್ಟಲೆ ನಡೆಯುವುದು. == ಗೀಗೀಪದ == ಏಕನಾದದ ಶೃತಿಗೆ ಕಥನಕವನವನ್ನೋ ಸಂತರ, ವೀರರ ಕಥೆಯ ಹಾಡನ್ನೋ ಇಬ್ಬರು ಕೂಡಿ ಹಾಡುವರು. ಪ್ರತಿ ಚರಣ ಮುಗಿದೊಡನೆ ಗೀಗೀ ಗೀಗೀ ಎಂದು ತಾಳಕ್ಕೆ ಸರಿಯಾಗಿ ಶೃತಿಗೂಡಿಸುವರು. ತೆಲುಗಿನಲ್ಲಿ ತಂದ ನಾನು ತಂದಾನುತಾನಾ ಎನ್ನುವರು. ಇಡೀ ರಾತ್ರಿ, ಮಲೆನಾಡಿನ ಅಡಕೆತೋಟದ ಪ್ರದೇಶಗಳಲ್ಲಿ ಮನೋರಂಜನೆಯಾಗಿ ಈ ಪದ ಹಾಡುವುದು ವಾಡಿಕೆ. ಮರಾಠಿಯಲ್ಲೂ ಇಂಥ ಪದಗಳಿವೆ. === ಗೊಂದಲ === ಮಲೆನಾಡಿನಲ್ಲಿ ಹಾಗೂ ಉತ್ತರ ಕರ್ನಾಟಕದ ಕರೆನಾಡಲ್ಲಿ ಭವಾನಿ ದೇವಿಯ ಭಕ್ತರು ಗೊಂದಲದ ಪದ ಹಾಡಿಸುವ ವಾಡಿಕೆಯಿದೆ. ಅಂಬಾ ಭವಾನಿ ಪೂಜೆ ನಡೆದಾಗ ಇಡೀ ರಾತ್ರಿ ಗೊಂದಲ ನಡೆಸುವರು. ಗೊಂದಲದವರ ಪಕ್ಕವಾದ್ಯ ಚೌಡಿಕೆಯಂತಿರುತ್ತದೆ. ತಾಮ್ರದ ಕೊಳಗಕ್ಕೆ ನರದ ತಂತಿ ಕಟ್ಟಿ ಅದನ್ನು ಥೊಯ್ ಥೊಯ್ ಎಂದು ಮೀಟುತ್ತ ದೇವಿಯ ಸ್ತುತಿರೂಪವಾದ ಪದಗಳನ್ನು ಅವರು ಹಾಡುತ್ತಾರೆ. ಗೊಂದಲ ಹಾಕುವವರು ಗಂಡಸರು. ಕಂಬಳಿ ಹೊದ್ದು ಕವಡೆ ಹಾರ ಹಾಕಿಕೊಂಡು, ಮುಖಕ್ಕೆ ಭಂಡಾರ ಕುಂಕುಮ ಹಚ್ಚಿಕೊಂಡು, ತಲೆಗೆ ಕರಡಿ ಚರ್ಮದ ಟೊಪ್ಪಿಗೆ ಹಾಕಿಕೊಂಡು ಸಿದ್ಧರಾಗುವ ಗೊಂದಲದವರ ವೇಷ ವಿಚಿತ್ರವಾಗಿರುತ್ತದೆ. ಗೊಂದಲ ಮರಾಠಿ ಭಜನೆಯನ್ನು ಹೋಲುತ್ತದೆ. ವಾದ್ಯದ ನಾದ, ಪದಗಳ ಗುಂಗು, ತಾಳ, ಕುಣಿತ- ಎಲ್ಲ ಸೇರಿದಾಗ ಹಾಡುವವರಿಗೂ ನೋಡುವವರಿಗೂ ಭಕ್ತಿಯ ಆವೇಶ ಬಂದಂತಾಗುತ್ತದೆ. === ಪಾಡ್ದನ ಮತ್ತು ಓಬೇಲೆ ಪದ === ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಳು ಭಾಷೆಯಲ್ಲಿ ಭೂತನನ್ನು ಕುರಿತು ಹಾಡುವ ಪದಗಳಿವು. ಸಾವಿನ ಸಮಯದಲ್ಲೂ ಹಾಡುವುದಿದೆ. ಹಾಡುವವರು ಭೂತ ಮೈಮೇಲೆ ಬಂದಂತೆ ಭಯಾನಕವಾಗಿ ಕುಣಿಯುತ್ತ ದನಿ ಗೈಯ್ಯುವರು. ಓಬೇಲೆ ಪದಗಳನ್ನು ನೇಜಿ (ನೆಲ್ಲು) ನೆಡುವಾಗ ಹೆಣ್ಣು ಮಕ್ಕಳು ಹಾಡುವ ವಾಡಿಕೆ. ದೋಣಿ ನಡೆಸುವಾಗಲೂ ಬಂದರಿನಲ್ಲಿ ಸಾಮಾನು ಹೊರುವಾಗಲೂ ಓಬೇಲೆ ಹಾಗೂ ಐಸಾ ಪದಗಳನ್ನು ಸಾಮಾನ್ಯವಾಗಿ ಹಾಡುತ್ತಿರುತ್ತಾರೆ. == ತ್ರಿಪದಿ == ಹಳ್ಳಿಯ ಪದಗಳಲ್ಲಿ ತ್ರಿಪದಿಯ ಸ್ಥಾನ ಮಹತ್ತ್ವದ್ದು. ಹೆಣ್ಣು ಮಕ್ಕಳ ಹಾಡುಗಳಲ್ಲಿ ಬಹುಭಾಗ ಈ ಮಟ್ಟಿನಲ್ಲಿದೆ. ಹಾಲು ಜೇನು ಸುರಿದಂತೆ ಇದರ ಸವಿ. ಮಲ್ಲಿಗೆ ಮೊಗ್ಗು ಅರಳಿದಂತೆ ಇದರ ಪರಿಮಳ. ಮೂರೇ ಪಾದಗಳು ಕಂಡರೂ ಹಾಡುವಾಗ ನಡುವಿನ ಪಾದದ ಪುನರಾವರ್ತನೆಯಿಂದ ತ್ರಿಪದಿಗೆ ನಾಲ್ಕು ಪಾದಗಳಾಗುತ್ತವೆ. ಕುಟ್ಟುವಾಗ, ಬೀಸುವಾಗ, ಜೋಗುಳ ಹಾಡುವಾಗ, ಪೂಜೆ ಮಾಡುವಾಗ, ಜೀವನದ ರಸಸಮಯಗಳಲ್ಲಿ ತ್ರಿಪದಿಯ ಹಾಡುಗಳನ್ನು ಜನ ಬಳಸುತ್ತಾರೆ. ಒಬ್ಬರೋ ಇಬ್ಬರೋ ಹಲವರೋ ಹಾಡುವುದು ಉಂಟು. ರಾಗಗಳು ಒಂದೊಂದು ಕಡೆ ಒಂದೊಂದು ರೀತಿಯವಾಗಿರುತ್ತವೆ. ದಕ್ಷಿಣಾದಿ ಸಂಗೀತದ ಮಧ್ಯಮಾವತಿ, ಕಾಂಭೋಧಿ, ಆನಂದ ಭೈರವಿ, ನಾದನಾಮಕ್ರಿಯೆ, ನವರೋಜು ರಾಗಗಳು ಬಳಕೆಯಲ್ಲಿವೆ. ಆದರೂ ಎಲ್ಲಿಯೂ ಶಾಸ್ತ್ರೀಯ ಸಂಗೀತದ ಛಾಯೆ ಕಾಣದು. ದನಿಯಲ್ಲಿ ಎಳೆತದಲ್ಲಿ ತಾಳಲಯಗಳಲ್ಲಿ ದೇಸಿಯ ಸೊಗಡೇ ಹೆಚ್ಚು. ಇಡೀ ಕನ್ನಡ ನಾಡಿನಲ್ಲೆಲ್ಲ ತ್ರಿಪದಿಯ ಬೆಳೆ ಹುಲುಸಾಗಿ ಹಬ್ಬಿದೆ. ನಾಡು ನುಡಿ ಒಂದೇ ಎಂಬುದಕ್ಕೆ ತ್ರಿಪದಿಯೂ ಒಂದು ಆಧಾರ. ಇದರ ಸಾಹಿತ್ಯ ಮತ್ತು ಸಂಗೀತ ಹಿಂದಿನ ಮತ್ತು ಇಂದಿನ ಉತ್ತಮ ಕವಿಗಳಿಗೆ ಸ್ಫೂರ್ತಿ ಕೊಟ್ಟಿದೆ. == ಮದುವೆಯ ಹಾಡುಗಳು == ಮದುವೆಯ ಸಂದರ್ಭದಲ್ಲಿನ ಎಣ್ಣೆಯೊತ್ತುವ ಹಾಡು, ಉರುಟಣೆ ಹಾಡು, ಸೋಬಾನೆ ಪದ, ಬೀಗಿತ್ತಿ ಹಾಸ್ಯದ ಪದಗಳು, ಆರತಿ ಪದಗಳು ಹೇರಳವಾಗಿ ಬಳಕೆಯಲ್ಲಿವೆ. ಇವಕ್ಕೆ ಒಂದೊಂದು ಉದಾಹರಣೆ ನೋಡಬಹುದು. === ಎಣ್ಣೆಯೊತ್ತುವ ಪದ === === ಉರುಟಣೆ ಹಾಡು === === ಸೋಬಾನೆ ಪದ === == ತಿಂಗಳುಮಾವನ ಪದ == ಹುಣ್ಣಿಮೆ ಹಬ್ಬದ ರಾತ್ರಿ ಬೆಳುದಿಂಗಳ ಆನಂದದಲ್ಲಿ ಕೂಡಿಕೊಂಡು ಹೆಣ್ಣುಮಕ್ಕಳು ಕೈ ಕೈ ಹಿಡಿದುಕೊಂಡು ಗರಗರನೆ ಸುತ್ತು ತಿರುಗುತ್ತ ಈ ಪದಗಳನ್ನು ಹಾಡುವರು. == ಮಾನವಮಿ ಪದ == ನವರಾತ್ರಿ ನಾಡಹಬ್ಬದಲ್ಲಿ ಮಕ್ಕಳು ಹರಕೆ ಪದ ಹಾಡುವ ಸಂಪ್ರದಾಯ ಹಿಂದಿನಿಂದ ಬಂದಿದೆ. ಚೌಪದಿಯಲ್ಲಿ ನಾಲ್ಕು ಸಾಲು ಬರುತ್ತದೆ. ಅಂತೂ ಲಾವಣಿ, ತ್ರಿಪದಿಗಳು ಹಳ್ಳಿಯ ಹಾಡಿನಲ್ಲಿ ಮಹತ್ತ್ವದ ಸ್ಥಾನ ಪಡೆದಿವೆ. ಹೀಗೆಯೆ ಸಾಂಗತ್ಯ ಮತ್ತು ರಗಳೆಗಳಿಗೂ ಜನಪದ ಸಂಗೀತವೇ ಮೂಲವಾಗಿದ್ದಿರಬಹುದು. ಅಲ್ಲದೆ ಶ್ರಮಜೀವಿಗಳ ಹಾಡುಗಳು, ಹಂತಿ ಪದ, ಡೊಳ್ಳು ಪದ, ಮದುವೆ ಹಾಡು, ಜುಂಜಪ್ಪನ ಪದ, ಸುವ್ವಿ ಪದ, ಲಾಲಿ ಪದ, ಉತ್ತರೆ ಮಳೆ ಹಾಡು, ಕೊರವಂಜಿ ಹಾಡು, ಕಣಿ ಹೇಳೋ ಹಾಡು, ಹಚ್ಚೆ ಕಟ್ಟಿಸಿಕೊಳ್ಳುವ ಹಾಡು- ಈ ಮೊದಲಾದವೂ ಇವೆ. ಜಾತ್ರೆ ಮತ್ತು ಪರಿಷೆಯ ಮಹಾಮೇಳಗಳಲ್ಲಿ ಕೊಂಬು, ಕಹಳೆ, ಉರುಮೆ, ಡೊಳ್ಳು, ಮದ್ದಲೆ, ಕರಡೆ ವಾದ್ಯಗಳ ಸೊಲ್ಲು ಮುಗಿಲು ಮುಟ್ಟುತ್ತದೆ. ಅವಕ್ಕೆ ಅನುಸರಿಸಿ ಜನ ಹಾಡುತ್ತಾರೆ, ಕುಣಿಯುತ್ತಾರೆ ; ನಂದಿಕೋಲು ಕುಣಿಸುತ್ತಾರೆ; ಮನಬಂದಂತೆ ಪದ ಹಾಡುತ್ತಾರೆ ; ಜಯಕಾರ ಮೊಳಗಿಸುತ್ತಾರೆ. == ಕಥನಗೀತಗಳು == ನಾಡಿನ ವೀರಾಗ್ರಣಿಗಳ ಹಾಗೂ ವೀರಮಾತೆಯರ ಮಹಾತ್ಯಾಗಜೀವಿಗಳ ಚರಿತೆಯನ್ನು ಸುಲಭವಾಗಿ ಹಾಡುವಂತೆ ರಚನೆ ಮಾಡಿದ್ದಾರೆ. ಅದರಲ್ಲಿ ಕೆರೆಗೆ ಹಾರ ಎಂಬ ನೀಳ್ಗವನದಲ್ಲಿ ಕರುಣರಸ ಮಡುಗಟ್ಟಿ ನಿಂತಿದೆ. ಒಂದು ಹಳ್ಳಿಯ ಮಲ್ಲನಗೌಡರು ಕೆರೆ ಕಟ್ಟಿಸಿದಾಗ ನೀರು ನಿಲ್ಲಲಿಲ್ಲ. ಬಲಿ ಕೊಡಬೇಕೆಂದು ಜೋಯಿಸರು ಸಲಹೆ ಕೊಟ್ಟರು. ಕಿರಿಯ ಸೊಸೆ ಭಾಗೀರಥಿ ಮುಂದೆ ಬಂದು ಕೆರೆಗೆ ಆಹಾರವಾಗುತ್ತಾಳೆ. ಗಂಗೆ ಒಡಮೂಡುತ್ತಾಳೆ. ಅಂಥ ಹೆಂಡತಿಯನ್ನು ಕಳೆದುಕೊಂಡ ಗಂಡನೂ ಪ್ರಾಣಾರ್ಪಣೆ ಮಾಡುತ್ತಾನೆ. ಈ ಪದ ಖಂಡಜಾತಿ ಚಾಪು ತಾಳದಲ್ಲಿದೆ. ಏಕನಾದದ ಜೊತೆಯಲ್ಲಿ ಹಾಡಿದರೆ ಬಹು ಸ್ವಾರಸ್ಯವಾಗಿರುತ್ತದೆ. ಕೆರೆಗೆ ಹಾರದಂತೆಯೇ ಗೋವಿನ ಕಥೆ ಮತ್ತೊಂದು ಅಮರವಾದ ಪದ- ದಾಸರಪದ ಮತ್ತು ವಚನಗಳೂ ಜನಪ್ರಿಯವಾಗಿ ನಾಡಿನಲ್ಲೆಲ್ಲ ಹಬ್ಬಿವೆ ; ವೇದ, ಪುರಾಣಗಳ ತಿರುಳನ್ನು ತಿಳಿಗನ್ನಡದಲ್ಲಿವು ಸಾರಿವೆ. ಹಾಡಿಕೊಳ್ಳಲು ಯೋಗ್ಯವಾಗಿವೆ. ಇವುಗಳ ಹಾಡುಗಾರಿಕೆಯೇ ಒಂದು ಬಗೆಯ ಸಂಪ್ರದಾಯವಾಗಿದೆ. ರಾಗ, ಭಾವ, ಲಯ ಪ್ರಧಾನವಾದ ಇವಕ್ಕೆ ಸಂಗೀತದಲ್ಲೂ ಸಾಹಿತ್ಯದಲ್ಲೂ ಹಿರಿಯ ಸ್ಥಾನವೇರ್ಪಟ್ಟಿದೆ. == ಯಕ್ಷಗಾನ == ಕರ್ನಾಟಕದಲ್ಲಿ ಪ್ರಸಿದ್ಧವಾಗಿರುವ ಒಂದು ಪ್ರದರ್ಶನ ಕಲೆಯಿದು. ರಾಮಾಯಣ, ಭಾರತ, ಭಾಗವತ, ಪುರಾಣಗಳಿಂದ ಆರಿಸಿದ ಸಂದರ್ಭಗಳನ್ನು ಪ್ರಸಂಗಗಳಿಗೆ ಅಳವಡಿಸಿಕೊಂಡಿದ್ದಾರೆ. ಇದರಲ್ಲಿ ಸಂಗೀತ, ನೃತ್ಯಗಳೇ ಹೆಚ್ಚು. ಮಾತುಗಾರಿಕೆಯೂ ಉಂಟು. ಸಂಗೀತ, ಕುಣಿತ, ವಚನಗಳು-ಪ್ರಸಂಗದ ಮೂರು ಮುಖ್ಯ ಅಂಶಗಳು. ದಕ್ಷಿಣಾದಿ ಸಂಗೀತಶಾಸ್ತ್ರ ಸಂಪ್ರದಾಯದ ಘನರಾಗಗಳನ್ನೇ ಹೆಚ್ಚಾಗಿ ಬಳಸುವರು. ನಾಟಿ, ಮೋಹನ, ಆನಂದಭೈರವಿ, ಶಂಕರಾಭರಣ, ಬೇಹಾಗ್, ಬೇಗಡೆ, ಕಾನಡ, ಸುರಟಿ, ಕೇದಾರಗೌಳ, ಸಿಂಧುಭೈರವಿ, ನಾದನಾಮ ಕ್ರಿಯ, ಮುಖಾರಿ ಮೊದಲಾದ ರಾಗಗಳು ಬಳಕೆಯಲ್ಲಿವೆ. ಬೇರೆ ಬೇರೆ ಪ್ರದೇಶಗಳಲ್ಲಿ ಶೈಲಿಯಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬರುತ್ತದೆ. ಪ್ರಸಂಗದಲ್ಲಿ ಭಾಗವತರು ಬಹಳ ಮುಖ್ಯ. ಅವರೇ ಪ್ರಸಂಗವನ್ನು ನಡೆಸಿಕೊಡುವ ಸೂತ್ರಧಾರರು. ನಾಂದಿ ಹಾಡುಗಳು, ಭರತವಾಕ್ಯ- ಎಲ್ಲ ಅವರವೇ. ಜಾಗಟೆ ಬಡಿದು ಅವರು ಹಾಡಿನ ಗತಿ ತೋರಿಸುತ್ತಾರೆ. ಮದ್ದಲೆಯವನು ಮದ್ದಲೆ ಬಾರಿಸುತ್ತಾನೆ. ಹಿಂದೆ ಶೃತಿಗೆ ಚಿಟ್ಮೇಳ, ಪುಂಗಿಗಳನ್ನು ಉಪಯೋಗಿಸುತ್ತಿದ್ದರು. ಈಗ ಹಾರ್ಮೋನಿಯಂ ಪೆಟ್ಟಿಗೆ ಇಟ್ಟುಕೊಳ್ಳುತ್ತಾರೆ. ಇಡೀ ರಾತ್ರಿ ಯಕ್ಷಗಾನ ಪ್ರಸಂಗ ನಡೆಯುತ್ತದೆ. ಅರುಣೋದಯಕ್ಕೆ ಸರಿಯಾಗಿ ಮಂಗಳ ಹಾಡುತ್ತಾರೆ. ಯಕ್ಷಗಾನ ಕಲೆಗೊಂದು ಶಾಸ್ತ್ರೀಯ ಬುನಾದಿ ಉಂಟು. ಹತ್ತಾರು ವರ್ಷ ಅದನ್ನು ಅಭ್ಯಾಸ ಮಾಡುವವರಿದ್ದಾರೆ. ಕಲೆಗಳಲ್ಲೆಲ್ಲ ಇದು ಬಹು ತೂಕವಾದುದೆಂಬುದು ನಿರ್ವಿವಾದವಾದ ಅಂಶ. ಯಕ್ಷಗಾನದ ಒಂದು ರೂಪವಾದ ತಾಳ ಮದ್ದಲೆಯಲ್ಲಿ ಪಾತ್ರಧಾರಿಗಳು ರಂಗಮಂಟಪದಲ್ಲಿ ಕುಳಿತು ವೇಷಭೂಷಣ ಮತ್ತು ನೃತ್ಯಗಳಲ್ಲದೆ ಪ್ರಸಂಗವನ್ನು ಮಾತ್ರ ನಡೆಸಿಕೊಡುವರು. ಭಾಗವತರು, ಹಿಮ್ಮೇಳದವರು ಬಯಲಾಟದಲ್ಲಿನಂತೆ ಇರುವರು ; ಅರ್ಥಧಾರಿಗಳು ಸಮಯಸ್ಫೂರ್ತಿಯಿಂದ ಮಾತಾಡುವರು. ಅನೇಕ ಕಡೆ ಪಾತ್ರಧಾರಿಗಳ ಬುದ್ಧಿವಂತಿಕೆ ಎದ್ದು ಕಾಣುವುದು. ವಾಕ್ಚಾತುರ್ಯ, ಆಶುಭಾಷಣಗಳೂ ಉಂಟು. ಹಲವೇಳೆ ವಾಗ್ಯುದ್ಧಗಳಾಗುತ್ತವೆ. ಈ ಕಲೆ ಸಾವಿರ ವರ್ಷದಿಂದಲೂ ಬೆಳೆದುಬಂದಿದೆ. == ಹಾಸ್ಯದ ಪದ == ಅಸಂಬದ್ಧ ಪ್ರಲಾಪವಾದಾಗ ನಗು ಸಹಜ. ಹೀಗೆ ನಗು ಉಕ್ಕಿಸುವ ಹಾಡುಗಳಿಗೆ ಜನಪದ ಸಾಹಿತ್ಯದಲ್ಲಿ ಕೊರತೆಯೇನಿಲ್ಲ. == ಮಕ್ಕಳ ಹಾಡು == ಶಿಶುಸಾಹಿತ್ಯದ ರಚನೆ ಬಹಳ ಕಷ್ಟ. ಹಾಡೂ ಅಷ್ಟೆ. ಸಣ್ಣದಾಗಿರಬೇಕು. ಕಂಠಪಾಠ ಮಾಡುವಂತಿರಬೇಕು, ಮಹಾಪ್ರಾಣಾಕ್ಷರಗಳು, ಒತ್ತಕ್ಷರಗಳು ಹೆಚ್ಚಿಗಿರಬಾರದು. ಅವರು ಆನಂದಪಟ್ಟು ಕುಣಿಯುತ್ತ ಹಾಡುವಂತಿರಬೇಕು. ಇದರಲ್ಲೂ ಹಳ್ಳಿಯವರು ಹಿಂದೆ ಬಿದ್ದಿಲ್ಲ. ಎಂಬ ಗಣಪತಿಯ ಕೋಲಾಟದ ಪದವನ್ನು ಯಾವ ಮಗುತಾನೆ ಹಾಡಲು ಒಲ್ಲೆ ಅನ್ನುತ್ತದೆ ! === ಆಂಗ್ಲರ ಶಿಶು ಪ್ರಾಸ === ಈ ಪ್ರಾಸಕ್ಕೆ (ನರ್ಸರಿ ರೈಮ್) ಸಮನಾದ ಮತ್ತೊಂದು ಪದ : ಇದು ಕುಟ್ಟುವಾಗ ಹೇಳುವ ಹಾಡಾದರೂ ಶಿಶುಗಳಿಗೆ ಪ್ರಿಯವಾಗಿದೆ. ಮತ್ತೊಂದು ನವಿಲಿನ ಹಾಡು ; ಕೂಲಿಗಾರರು ಭಾರ ಎತ್ತುವಾಗ ಇದನ್ನು ಹಾಡುತ್ತಾರೆ, ಮಕ್ಕಳಿಗೆ ಚೆನ್ನಾಗಿದೆ. ಇನ್ನೂ ಒಂದು ಸೊಗಸಾದ ಹಾಡು- ಮಲ್ಲಿಗೆ ಹಾಡು. == ಹಳ್ಳಿಯ ಪದಗಳು == ಸಂಗೀತ, ನೃತ್ಯಗಳ ಜೊತೆಗೆ ಉತ್ತಮ ಸಾಹಿತ್ಯ ಜನಪದ ಸಂಗೀತದಲ್ಲಿ ಹುಲುಸಾಗಿ ಮೂಡಿದೆ. ಮಾಣಿಕ್ಯದಂಥ ಮಾತುಗಳು ನೂರಾರು ಹಳ್ಳಿಯ ಪದಗಳಲ್ಲಿ ಸಿಗುತ್ತವೆ : ಎಂಬ ನಾಡಪದದಂತೆ ಹಳ್ಳಿಹಾಡು ಹುಲ್ಲು ಬೆಳೆಯಂತೆ ಇಡೀ ನಾಡಿನಲ್ಲಿ ಸಹಜವಾಗಿ ಬೆಳೆದು ಅಲ್ಲಿನ ಭೂಮಿಯನ್ನೆಲ್ಲ ಆಕ್ರಮಿಸಿದೆ. ಹಳ್ಳಿಹಳ್ಳಿಯಲ್ಲೂ ವಿಧವಿಧವಾದ ಪದಗಳು ಸಿಗುತ್ತವೆ. ಅವನ್ನು ಶೇಖರಿಸಿ ಅಚ್ಚು ಮಾಡಿಸುವ ಕೆಲಸ ಮೊದಲು ಆಗಬೇಕು. ಅಷ್ಟೇ ಸಾಲದು. ಹಾಗೆ ಮುದ್ರಿಸಿದಾಗಲೂ ಅವನ್ನು ಹಾಡುವ ಕ್ರಮ ಎಲ್ಲರಿಗೂ ಗೊತ್ತಾಗದು. ಹಳ್ಳಿಗರ ಹಾಡಿನ ಗತ್ತುಗಳನ್ನು ಧ್ವನಿಮುದ್ರಣ ಮಾಡಬೇಕು. ಹಾಗೆ ಮಾಡಿದಲ್ಲಿ ಗಾಯಕರು ಮನಸ್ವಿ ಹಾಡಿ ಅವುಗಳ ರೀತಿ ನೀತಿಗಳನ್ನು ಕೆಡಿಸುವ ಸಂಭವವಿದೆ. ಈಚೆಗೆ ಅಲ್ಲಲ್ಲಿ ಈ ಕೆಲಸವೂ ನಡೆಯುತ್ತಿದೆ. ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಜಾನಪದ ವಿಭಾಗದವರು ಆಸ್ಥೆಯಿಂದ ಧ್ವನಿಮುದ್ರಣದ ಕಾರ್ಯವನ್ನು ಕೈಗೊಂಡಿದ್ದಾರೆ. ಬೆಂಗಳೂರಿನ ಆಕಾಶವಾಣಿಯವರೂ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯವರೂ ಈ ಬಗ್ಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ಶಿವರಾಮ ಕಾರಂತರು ಯಕ್ಷಗಾನದ ಸಂಗೀತದ ಒಳಹೊರಗನ್ನು ಶಾಸ್ತ್ರೀಯವಾಗಿ ವಿಮರ್ಶಿಸಿದ್ದಾರೆ. ಒಟ್ಟಿನಲ್ಲಿ ಜಾನಪದದ ಬಹು ಮುಖ್ಯ ಅಂಗವಾದ ಜನಪದ ಸಂಗೀತ ಈಚೆಗೆ ನಾಡಿನ ಹಿರಿಯರ, ವಿದ್ವಾಂಸರ ಗಮನ ಸೆಳೆದ ವಿಷಯವಾಗಿದೆ.(ಆರ್.ಬಿ.ಎಸ್.) == ನೋಡಿ == ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಭಾರತದ ಜನಪದ ನೃತ್ಯಗಳು ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜನಪದ ನೃತ್ಯಗಳು ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜನಪದ ಲೋಕ ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜನಪದ ಸಂಗೀತ ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಹಾದೇವಯ್ಯ ಕಂಸಾಳೆ ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜನಪದ ವಾದ್ಯಗಳು ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜನಪದ ರಂಗಭೂಮಿ ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕರ್ನಾಟಕ ಜಾನಪದ ಜಾನಪದ ಸಾಹಿತ್ಯ ಜಾನಪದ ಕಾವ್ಯ == ಉಲ್ಲೇಖ ==